ಒಡ್ಡೋಲಗ: ರಾಜನಾದವನು ಸಿಂಹಾಸನವನ್ನೇರಿ ಸಮಸ್ತ ಪ್ರಜಾ ಸಮೂಹಕ್ಕೆ ದರ್ಶನ ಕೊಡುವ ಮಹಾಸಭೆಗೆ ಈ ಹೆಸರಿದೆ. ಓಲಗವೆಂದರೆ ರಾಜಸಭೆ. ಒಡ್ಡು ಎಂಬ ಮಾತಿಗೆ ವಿಶಾಲವಾದದ್ದು, ಬಾಹುಳ್ಯವುಳ್ಳದ್ದು ಎಂಬ ಅರ್ಥ ಕನ್ನಡದಲ್ಲಿಯೂ ತೆಲುಗಿನಲ್ಲಿಯೂ ಇದೆ. ಪೇರೋಲಗಮು, ಒಡ್ಡೋಲಗಮು ಎಂಬ ಮಾತುಗಳನ್ನು ತೆಲುಗಿನ ಆದಿಕವಿಯಾದ ನನ್ನಯನೇ ಉಪಯೋಗಿಸಿದ್ದಾನೆ. ಸಭಾ ಮಂಟಪದೊಳೊಡ್ಡೋಲಗಂಗೊಟ್ಟು-ಎಂದು ಪಂಪ ಒಂದೆಡೆ ಹೇಳುತ್ತಾನೆ. ಸಭೆ ಸೇರುವುದಕ್ಕೆಂದೇ ಏರ್ಪಟ್ಟಿರುವ ವಿಶಾಲವಾದ ಭವನದಲ್ಲಿ ದೊರೆ ಪರಿವಾರ ಸಮೇತನಾಗಿ ಸೇರುವ ಸನ್ನಿವೇಶವೇ ಒಡ್ಡೋಲಗ. ಕನ್ನಡ ಕಾವ್ಯ ಹಾಗೂ ಚರಿತ್ರೆಗಳಲ್ಲಿ ನಿರೂಪಣೆಗೊಂಡಿರುವ ಒಡ್ಡೋಲಗಗಳ ಪ್ರಧಾನಾಂಶಗಳ ಆಧಾರದ ಮೇಲೆ ಅದರ ಸಾಮಾನ್ಯ ವರ್ಣನೆಯನ್ನಿಲ್ಲಿ ಕೊಡಲಾಗಿದೆ.

ಒಡ್ಡೋಲಗದಲ್ಲಿ ಮಂತ್ರಿಗಳು ದಂಡನಾಯಕರು ಎಲ್ಲ ಬಂದಿರುತ್ತಾರಾದರೂ ಅಲ್ಲಿ ಮಂತ್ರಾಲೋಚನೆಯೇನೂ ನಡೆಯುವುದಿಲ್ಲ. ಮಂತಣಸಾಲೆ ಬೇರೆ. ಅದು ಹೆಚ್ಚು ರಹಸ್ಯವಾದ ಮಂದಿರ. ಅಲ್ಲಿ ರಾಜ ಬಂiÀÄಸಿದವರಿಗೆ ಮಾತ್ರ ಪ್ರವೇಶ. ಓಲಗದಲ್ಲಿದ್ದು ರಾಜಸೇವೆ ಮಾಡುವವನನ್ನು ಓಲಗಕಾ¾ನೆಂದು ಕರೆಯುವುದುಂಟು. ಓಲಗಿಸು, ಓಲಯಿಸು ಎಂಬ ಮಾತುಗಳು ರಾಜನನ್ನು ಆಶ್ರಯಿಸಿಕೊಂಡಿರುವವರು ಅವನ ಒಲವನ್ನು ಗಳಿಸಿಕೊಳ್ಳಲು ಅವನ ಸಾಮೀಪ್ಯದಲ್ಲಿದ್ದುಕೊಂಡು ಸೇವಿಸುವುದು ಎಂಬ ಅರ್ಥವನ್ನು ಕೊಡುತ್ತವೆ.

ಒಡ್ಡೋಲಗದಲ್ಲಿ ರಾಜಪರಿವಾರವೆಲ್ಲ ಕಲೆತಿರುತ್ತಾರೆ. ರಾಜನ ಸಾಮಂತರು, ದಂಡನಾಯಕರು, ಮಂತ್ರಿಗಳು, ಆಶ್ರಿತರು, ಬಂಧುಗಳು, ಆಹ್ವಾನಿತರು ಎಲ್ಲರೂ ಅವರವರ ಅಂತಸ್ತಿಗೆ ಅನುಗುಣವಾದ ಸ್ಥಾನಗಳಲ್ಲಿ ಮಂಡಿಸಿರುತ್ತಾರೆ. ದೇಶ ವಿದೇಶಗಳಿಂದ ಬಂದಿರಬಹುದಾದ ರಾಯಭಾರಿಗಳು, ನಿಯೋಗಿಗಳು ಮೊದಲಾದವರು ಅರಸನ ಸಂದರ್ಶನ ಪಡೆಯಲು ಒಡ್ಡೋಲಗದಲ್ಲಿ ಅವಕಾಶವುಂಟು. ಕೌರವನ ಮಹಾಸಭೆಯನ್ನು ವರ್ಣಿಸಲು ಹೊರಟ ಕುಮಾರವ್ಯಾಸ ನಾನಾ ದಿಗಂತದ ಧರಣಿಪರು ಸಚಿವರು ಪಸಾಯ್ತರು ನೆರೆದುದನ್ನು ವರ್ಣಿಸಿದ್ದಾನೆ.
ರಾಜದರ್ಶನಾಕಾಂಕ್ಷಿಗಳಾದ ಜನರೆಲ್ಲ ಬಂದು ಆಸ್ಥಾನಮಂಟಪದಲ್ಲಿ ಸಮುಚಿತಾಸನಗಳಲ್ಲಿ ಕುಳಿತ ಮೇಲೆ ಅರಸ ಪರಮಾಪ್ತರಾದವರ ಜೊತೆಯಲ್ಲಿ ಒಡ್ಡೋಲಗಕ್ಕೆ ಬಿಜಯ ಮಾಡಿಸುತ್ತಾನೆ. ಆ ಸಮಯಕ್ಕೆ ಸರಿಯಾಗಿ ನಾನಾ ಮಂಗಳ ವಾದ್ಯಗಳ ಧ್ವನಿ ಹೊಮ್ಮುತ್ತದೆ. ಅದು ಅರಸನ ಬರವಿನ ಸೂಚನೆ. ಆ ಶಬ್ದ ಕೇಳುತ್ತಲೆ ಓಲಗಾರ್ತರೆಲ್ಲ ಎದ್ದು ನಿಂತು ಜಯ ಘೋಷಮಾಡುತ್ತಾರೆ. ಹೊಗಳುಭಟ್ಟರು ಅರಸನ ಬಿರುದಾವಳಿಯನ್ನು ಉದ್ಘೋಷಿಸುತ್ತಾರೆ. ‘ಅರಿರಾಜಗಿರಿವಜ್ರದಂಡ! ಸ್ನೇಹಿತನೃಪಸರಸಿಜವನಮಾರ್ತಾಂಡ! ಕನ್ನಡ ರಾಜ್ಯರಮಾರಮಣ! ಜಯ ಜಯ ಜಯತು!’ ಈ ಬಗೆಯ ಹೆಗ್ಗಳಿಕೆಯ ಹೆಸರುಗಳನ್ನು ವಂದಿಮಾಗಧರು ಗಟ್ಟಿಯಾಗಿ ಹೇಳುತ್ತಿರುವಾಗಲೆ ಪ್ರಭು ಮೆಲ್ಲನೆ ನಡೆದು ಬಂದು ಸಿಂಹಾಸನಕ್ಕೆ ಪ್ರದಕ್ಷಿಣೆಮಾಡಿ ಆಪ್ತರ ಹಸ್ತಲಾಘವವನ್ನು ಸ್ವೀಕರಿಸಿ ಸಿಂಹಾಸನವನ್ನು ಏರುತ್ತಾನೆ. ಒಡನೆಯೇ ಮಂಗಳಾಷ್ಟಕವನ್ನು ಹೇಳುವ ವಿಪ್ರರ ಧ್ವನಿ ಕೇಳಿಸುತ್ತದೆ. ಸಿಂಹಾಸನದ ಇಕ್ಕೆಲಗಳಲ್ಲಿ ನಿಂತ ಸೇವಕರು ಚಾಮರಗಳನ್ನು ಡಾಳಿಸುತ್ತಿರುತ್ತಾರೆ. ಆಮೇಲೆ ಗಾಯಕರು ತಕ್ಕ ಸಿದ್ಧತೆಯೊಡನೆ ಹಾಡತೊಡಗುತ್ತಾರೆ. ಅರಸನ ಸಮ್ಮುಖದಲ್ಲಿ ವೇದಜ್ಞರಾದ ಬ್ರಾಹ್ಮಣರು, ಶಾಸ್ತ್ರಜ್ಞರು ಮಂತ್ರೋದಯಾಢ್ಯರು ನಿಂತು ಆಶೀರ್ವಾದ ಮಾಡುತ್ತಾರೆ. ತಾರ್ಕಿಕರು, ವಾಚಕರು, ಭಾರತಿಗಳು (ಗಮಕಿಗಳು)-ಮೊದಲಾದ ವಿದ್ಯಾವಂತರು ಸಭೆಯಲ್ಲಿ ಮಂಡಿಸಿರುತ್ತಾರೆ. ಆಗ ದಳಪತಿ, ಮನ್ನೆಯರು, ಮಾಂಡಳಿಕರು, ರಾಯರಾವುತರು-ಮೊದಲಾದವರು ಅರಸನಿಗೆ ಇದಿರಾಗಿ ಬಂದು ಬಾಗಿ ಕೈಮುಗಿದು ತಮ್ಮ ಗೌರವ ಸಲ್ಲಿಸುತ್ತಾರೆ. ಒಡ್ಡೋಲಗದ ಒಂದೆಡೆಯಲ್ಲಿ ಗಾಯಕರು ತಂಬೂರಿ ಹಿಡಿದು ಗಾನಾಮೃತವನ್ನು ಸೂಚಿಸುತ್ತಿದ್ದರೆ ಇನ್ನೊಂದು ಕಡೆ ವೈಣಿಕರು ತಮ್ಮ ಕಲೆಯ ವೈಭವವನ್ನು ಮೆರೆಯಿಸುತ್ತಾರೆ. ಭಾರತ ರಾಮಾಯಣಾದಿ ಪುಣ್ಯ ಕಥೆಗಳನ್ನು ಭಾರತಿಗಳು ರಾಗವಾಗಿ ಹಿತವಾಗಿ ವಾಚನ ಮಾಡುತ್ತಾರೆ. ಇನ್ನೊಂದು ಕಡೆ ಭರತನಾಟ್ಯ ಬೆಳೆಯುತ್ತದೆ.

ಅರಸನ ಎಡಬಲಗಳಲ್ಲಿ ಸಾಲುಗಟ್ಟಿ ಕುಳಿತಿರುವ ಮಂತ್ರಿಗಳು ದಳಪತಿಗಳು ಪ್ರಭುವಿಗೆ ತಮ್ಮ ರಾಜಭಕ್ತಿ ಗೌರವಗಳನ್ನು ನಿವೇದಿಸಿ ವಂದನೆ ಸಮರ್ಪಿಸಿದ ಮೇಲೆ ರಾಜನ ಸಂದರ್ಶನಾಕಾಂಕ್ಷಿಗಳಾಗಿ ಬಂದ ಅನ್ಯರಾಜ್ಯಗಳ ನಿಯೋಗಿಗಳು ಎದ್ದು ವಂದಿಸಿ ಕಾಣಿಕೆಗಳನ್ನು ಒಪ್ಪಿಸಿ ತಮ್ಮ ಪ್ರಭುಗಳ ಸಂದೇಶಗಳನ್ನು ವರದಿಮಾಡಿ ಉಚಿತಾಸನಗಳಲ್ಲಿ ಕೂಡುತ್ತಾರೆ. ಎರಡನೆಯ ಪುಲಿಕೇಶಿಯ ಆಸ್ಥಾನದಲ್ಲಿ ಪರ್ಷಿಯದ ರಾಜ ನಿಯೋಗಿಗಳು ನಜರು ಒಪ್ಪಿಸುತ್ತಿರುವ ಶಿಲ್ಪವೊಂದು ದೊರೆತಿದೆ.

ಇದೇ ಸಮಯದಲ್ಲಿ ಸಭಾಮಂಟಪದ ಮುಂದೆ ಬಂiÀÄಲಿನಲ್ಲಿ ತುರಗಾರೋಹಕರು ಗಜಾರೋಹಕರು ತಮ್ಮ ನಿಪುಣತೆಯ ಪ್ರದರ್ಶನ ನೀಡುತ್ತಿರುವರು. ಮಲ್ಲಯುದ್ಧಗಳು ನಡೆದು ವಿಜಯಿಗಳಿಗೆ ಪಾರಿತೋಷಕಗಳನ್ನು ಹಂಚುವ ಸಮಾರಂಭ ನಡೆಯುವುದು.
ಓಲಗದ ಕಾರ್ಯಕ್ರಮ ಮುಗಿಯುವ ಮುನ್ನ ಸಮಸ್ತ ಓಲಗಕಾರರಿಗೂ ವೀಳೆಯ, ಉಡುಗೊರೆಗಳನ್ನು ಪ್ರಭುವಿನ ಅಪ್ಪಣೆಯಂತೆ ಅಧಿಕಾರಿಗಳು ಸಲ್ಲಿಸುವರು. ಅನಂತರ ಪ್ರಭುಗಳು ಎದ್ದು ನಿಂತು ಎಲ್ಲರ ಜಯಘೋಷಣೆ ಕೇಳುತ್ತ ಸಿಂಹಾಸನದಿಂದ ಇಳಿದು ಆಪ್ತಪರಿವಾರದೊಡನೆ ಅಂತಃಪುರಕ್ಕೆ ದಯಮಾಡಿಸುವರು. ಆಮೇಲೆ ಓಲಗಕಾರರು ಚದರುವರು.	(ಕೆ.ವಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ